PhonePe Blogs Main Featured Image

Trust & Safety

ಫಿಶಿಂಗ್ ದಾಳಿಯನ್ನು ಗುರುತಿಸುವುದು ಮತ್ತು ನಿಲ್ಲಿಸುವುದು ಹೇಗೆ

PhonePe Regional|3 min read|20 March, 2025

URL copied to clipboard

ಇಮೇಲ್‌ಗಳು, ಪಠ್ಯ ಸಂದೇಶಗಳು ಮತ್ತು ಫೋನ್ ಕರೆಗಳ ಮೂಲಕ ಭಾರತೀಯರನ್ನು ಗುರಿಯಾಗಿಸಿಕೊಂಡು ಫಿಶಿಂಗ್ ದಾಳಿಗಳು ಹೆಚ್ಚಾಗಿ ನಡೆಯುತ್ತಿವೆ. ಡಿಜಿಟಲ್‌ ಸೇವೆಗಳಿಗೆ ಮೊಬೈಲ್‌ ಸಾಧನಗಳನ್ನೇ ಹೆಚ್ಚಾಗಿ ಬಳಸುವುದರಿಂದ ಇಂತಹ ಮೋಸಗೊಳಿಸುವ ಸ್ಕೀಮ್‌ಗಳಿಗೆ ಭಾರತ ಗುರಿಯಾಗಿದೆ. ಈ ವಂಚನೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ನಿಮ್ಮ ಗುರುತು ಮತ್ತು ಹಣವನ್ನು ರಕ್ಷಿಸಿಕೊಳ್ಳಬಹುದಾಗಿದೆ. 

ಇಲ್ಲಿದೆ ಫಿಶಿಂಗ್ ಮತ್ತು ಅದರ ವಿಧಗಳ ವಿವರ.

ಫಿಶಿಂಗ್ ಎಂದರೇನು?

ಫಿಶಿಂಗ್ ಎನ್ನುವುದು ಸೋಶಿಯಲ್‌ ಎಂಜಿನಿಯರಿಂಗ್ ವಂಚನೆಯಾಗಿದ್ದು, ಇದರಲ್ಲಿ ವಂಚಕರು ವೈಯಕ್ತಿಕವಾದ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವಂತೆ ಅಥವಾ ಮಾಲ್‌ವೇರ್ ಡೌನ್‌ಲೋಡ್ ಮಾಡಲು ಕಾರಣವಾಗುವ ದುರುದ್ದೇಶಪೂರಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವಂತೆ ಪ್ರೇರೇಪಿಸಿ ಜನರನ್ನು ಮೋಸಗೊಳಿಸುತ್ತಾರೆ.

ಫಿಶರ್‌ಗಳು ಸಾಮಾನ್ಯವಾಗಿ ನಿಮ್ಮ ಬ್ಯಾಂಕ್, ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಅಥವಾ ಸರ್ಕಾರಿ ಸಂಸ್ಥೆಯಂತಹ ಕಾನೂನುಬದ್ಧ ಸಂಸ್ಥೆಗಳ ಇಮೇಲ್‌ನಂತೆ ಕಾಣುವ ಮೋಸಗೊಳಿಸುವ ಇಮೇಲ್‌ಗಳನ್ನು ಬಳಸುತ್ತಾರೆ. ಈ ಸಂದೇಶಗಳು ಆಗಾಗ್ಗೆ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ. ಅಲ್ಲದೇ ಲಿಂಕ್ ಮೇಲೆ ಕ್ಲಿಕ್ ಮಾಡಲು, ಅಟ್ಯಾಚ್‌ಮೆಂಟ್‌ ಅನ್ನು ಡೌನ್‌ಲೋಡ್ ಮಾಡಲು ಅಥವಾ ಪಾಸ್‌ವರ್ಡ್‌ಗಳು, ಡೆಬಿಟ್ / ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಅಥವಾ ಆಧಾರ್ ಲಾಗಿನ್‌ ಮಾಹಿತಿಗಳಂತಹ ವೈಯಕ್ತಿಕ ವಿವರಗಳನ್ನು ಒದಗಿಸಲು ನಿಮ್ಮನ್ನು ಒತ್ತಾಯಿಸುತ್ತವೆ.

ಫಿಶಿಂಗ್ ಇಮೇಲ್‌ಗಳನ್ನು ಗುರುತಿಸುವುದು ಹೇಗೆ

  • ಸಾಮಾನ್ಯ ವಿಷಯ: ನಿಜವಾದ ಇಮೇಲ್‌ಗಳು ಸಾಮಾನ್ಯವಾಗಿ ನಿಮ್ಮ ಹೆಸರನ್ನು ಉಲ್ಲೇಖಿಸುತ್ತವೆ. ಬ್ಯಾಂಕಿಂಗ್ ಸಂಸ್ಥೆಯಿಂದ ಇಮೇಲ್ ಬಂದಿದ್ದರೆ ಕಾರ್ಡ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯಂತಹ ನಿಮ್ಮ ವಿವರಗಳನ್ನು ಒಳಗೊಂಡಿರುತ್ತವೆ ಅಥವಾ ಆ ಇಮೇಲ್ ಇ-ಕಾಮರ್ಸ್ ಬ್ರ್ಯಾಂಡ್‌ನಿಂದ ಬಂದಿದ್ದರೆ ನಿಮ್ಮ ಆರ್ಡರ್ ಸಂಖ್ಯೆಯನ್ನು ಒಳಗೊಂಡಿರುತ್ತದೆ. ಆದರೆ ಫಿಶಿಂಗ್ ಇಮೇಲ್‌ಗಳು ಇವುಗಳನ್ನು ಹೊಂದಿರುವುದಿಲ್ಲ. ಅವು ಸಾಮಾನ್ಯ ವಿಷಯವನ್ನು ಹೊಂದಿರುತ್ತವೆ ಮತ್ತು ಅದರಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಲು ನಿಮ್ಮನ್ನು ಪ್ರೇರೇಪಿಸುತ್ತವೆ.
  • ಅನುಮಾನಾಸ್ಪದವಾಗಿ ಕಾಣುವ ಕಳುಹಿಸುವವರ ವಿಳಾಸಗಳು: ಇಮೇಲ್ ವಿಳಾಸವನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅದರಲ್ಲಿ ಕಾಗುಣಿತ ದೋಷಗಳು ಅಥವಾ ಅಸಹಜ ಅಕ್ಷರಗಳು ಇರಬಹುದು.
  • ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸುವ ವಿಷಯಗಳು: “ತಕ್ಷಣವೇ ಕ್ರಮ ಕೈಗೊಳ್ಳುವ ಅಗತ್ಯವಿದೆ” ಅಥವಾ “ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗುತ್ತದೆ” ಎಂಬಂತಹ ಮುಂತಾದ ವಾಕ್ಯಗಳಿದ್ದರೆ ಅದನ್ನು ಎಚ್ಚರಿಕೆಯ ಕರೆಗಂಟೆ ಎಂದು ಪರಿಗಣಿಸಬಹುದು.
  • ವೈಯಕ್ತಿಕ ಮಾಹಿತಿಗಾಗಿ ವಿನಂತಿಗಳು: ಕಾನೂನುಬದ್ಧ ಸಂಸ್ಥೆಗಳು ಅಪರೂಪವೆಂಬಂತೆ ಮಾತ್ರ ಇಮೇಲ್ ಮೂಲಕ ಸೂಕ್ಷ್ಮ ಮಾಹಿತಿಯನ್ನು ಕೇಳುತ್ತವೆ.
  • ವ್ಯಾಕರಣ ಮತ್ತು ಕಾಗುಣಿತ ದೋಷಗಳು: ಫಿಶಿಂಗ್ ಇಮೇಲ್‌ಗಳು ಸಾಮಾನ್ಯವಾಗಿ ಟೈಪಿಂಗ್ ಮತ್ತು ವ್ಯಾಕರಣ ದೋಷಗಳನ್ನು ಹೊಂದಿರುತ್ತವೆ.

ಫಿಶಿಂಗ್ ತಪ್ಪಿಸುವುದು ಹೇಗೆ

  • ಅನಿರೀಕ್ಷಿತ ಇಮೇಲ್‌ಗಳ ಬಗ್ಗೆ ಜಾಗರೂಕವಾಗಿರಿ: ಅದು ವಿಶ್ವಾಸಾರ್ಹ ಮೂಲದಿಂದ ಬಂದಂತೆ ಕಂಡುಬಂದರೂ, ಜಾಗರೂಕರಾಗಿರಿ ಮತ್ತು ಸಂದೇಶವನ್ನು ಎಚ್ಚರಿಕೆಯಿಂದ ಓದದೆ ಮತ್ತು ಕಳುಹಿಸಿದವರು ಯಾರೆಂದು ಪರಿಶೀಲಿಸದೆ ಆತುರದಿಂದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
  • ಅನುಮಾನಾಸ್ಪದ ಇಮೇಲ್‌ಗಳಲ್ಲಿರುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ: ಬದಲಾಗಿ, ವೆಬ್‌ಸೈಟ್ ವಿಳಾಸವನ್ನು ನೇರವಾಗಿ ನಿಮ್ಮ ಬ್ರೌಸರ್‌ನಲ್ಲಿ ಟೈಪ್ ಮಾಡಿ.
  • ಕಳುಹಿಸಿದವರ ಗುರುತನ್ನು ಪರಿಶೀಲಿಸಿ: ಇಮೇಲ್‌ನ ಕಾನೂನುಬದ್ಧತೆಯನ್ನು ಖಚಿತಪಡಿಸಲು ನಿಮಗೆ ತಿಳಿದಿರುವ ಫೋನ್ ಸಂಖ್ಯೆ ಅಥವಾ ವೆಬ್‌ಸೈಟ್ ಮೂಲಕ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಿ.
  • ನಿಮ್ಮ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್‌ ಆಗಿರುವಂತೆ ನೋಡಿಕೊಳ್ಳಿ: ಆ್ಯಂಟಿವೈರಸ್ ಸಾಫ್ಟ್‌ವೇರ್ ಮತ್ತು ವೆಬ್ ಬ್ರೌಸರ್‌ಗಳು ಫಿಶಿಂಗ್ ಪ್ರಯತ್ನಗಳನ್ನು ಪತ್ತೆಹಚ್ಚಲು ಸಹಾಯ ಮಾಡಬಹುದು.

ಸ್ಮಿಶಿಂಗ್‌ ಎಂದರೇನು? 

ಸ್ಮಿಶಿಂಗ್‌ (SMS ಫಿಶಿಂಗ್) ಎಂಬುದು ಒಂದು ರೀತಿಯ ವಂಚನೆಯಾಗಿದ್ದು, ಇದರಲ್ಲಿ ಸ್ಕ್ಯಾಮರ್‌ಗಳು ಜನರಿಗೆ ಪಠ್ಯ ಸಂದೇಶಗಳನ್ನು ಕಳುಹಿಸುವ ಮೂಲಕ ದುರುದ್ದೇಶಪೂರಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವಂತೆ ಅಥವಾ ವೈಯಕ್ತಿಕ ಮಾಹಿತಿಯನ್ನು ಒದಗಿಸುವಂತೆ ಪ್ರೇರೇಪಿಸುತ್ತಾರೆ. ಅವರು ಡೆಲಿವರಿ ಸೇವೆಗಳು, ಬ್ಯಾಂಕ್‌ಗಳಂತೆ ಸೋಗು ಹಾಕಬಹುದು ಅಥವಾ ನೀವು ಬಹುಮಾನ ಗೆದ್ದಿದ್ದೀರಿ, ಅದನ್ನು ಕ್ಲೈಮ್‌ ಮಾಡಿಕೊಳ್ಳಿ ಎಂದು ತಿಳಿಸಬಹುದು.

ಸ್ಮಿಶಿಂಗ್‌ ಸ್ಕ್ಯಾಮ್‌ಗಳನ್ನು ಗುರುತಿಸುವುದು ಹೇಗೆ

  • ನಕಲಿ ಪ್ಯಾಕೇಜ್ ಡೆಲಿವರಿ ನೋಟಿಫಿಕೇಶನ್‌ಗಳು: “ನಿಮ್ಮ ಪ್ಯಾಕೇಜ್ ಶೀಘ್ರದಲ್ಲೇ ನಿಮ್ಮನ್ನು ತಲುಪಲಿದೆ. ನಿಮ್ಮ ವಿಳಾಸವನ್ನು ಖಚಿತಪಡಿಸಲು ಇಲ್ಲಿ ಕ್ಲಿಕ್ ಮಾಡಿ.”
  • OTP ಮತ್ತು ವೈಯಕ್ತಿಕ ಡೇಟಾ ವಿನಂತಿಗಳು: ಖಾತೆ ಪರಿಶೀಲನೆಯ ನೆಪದಲ್ಲಿ ವಂಚಕರು ವ್ಯಕ್ತಿಗಳನ್ನು OTP ಗಳು ಅಥವಾ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವಂತೆ ಮಾಡಿ ಮೋಸಗೊಳಿಸುತ್ತಾರೆ. 
  • ನಕಲಿ ಸ್ಪರ್ಧೆ ಅಥವಾ ಬಹುಮಾನಗಳು: “ಅಭಿನಂದನೆಗಳು! ನೀವು ಫ್ರೀ ಗಿಫ್ಟ್‌ ಗೆದ್ದಿದ್ದೀರಿ. ಈಗಲೇ ಅದನ್ನು ಕ್ಲೈಮ್ ಮಾಡಿ!”

ಸ್ಮಿಶಿಂಗ್‌ ಅನ್ನು ತಪ್ಪಿಸುವುದು ಹೇಗೆ

  • ಅನುಮಾನಾಸ್ಪದ ಸಂದೇಶಗಳಲ್ಲಿರುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ: ಫೋನ್ ಸಂಖ್ಯೆ ಪರಿಚಿತವಾಗಿರುವಂತೆ ಕಂಡರೂ, ಅಂತಹ SMS ಬಗ್ಗೆ ಜಾಗರೂಕರಾಗಿರಿ.
  • ವೈಯಕ್ತಿಕ ಮಾಹಿತಿಯೊಂದಿಗೆ ಪ್ರತ್ಯುತ್ತರಿಸಬೇಡಿ: ಕಾನೂನುಬದ್ಧ ಸಂಸ್ಥೆಗಳು ಪಠ್ಯ ಸಂದೇಶಗಳ ಮೂಲಕ ಸೂಕ್ಷ್ಮ ಮಾಹಿತಿಯನ್ನು ಕೇಳುವುದಿಲ್ಲ.
  • ಅನುಮಾನಾಸ್ಪದ ಸಂಖ್ಯೆಗಳನ್ನು ಬ್ಲಾಕ್‌ ಮಾಡಿ: ಇದರಿಂದ ನೀವು ಸ್ವೀಕರಿಸುವ ಸ್ಮಿಶಿಂಗ್ ಪ್ರಯತ್ನಗಳ ಪ್ರಮಾಣವನ್ನು ಕಡಿಮೆ ಮಾಡಬಹುದು.

ವಿಷಿಂಗ್ ಎಂದರೇನು?

ವಿಷಿಂಗ್ (ವಾಯ್ಸ್ ಫಿಶಿಂಗ್) ಒಂದು ರೀತಿಯ ವಂಚನೆಯಾಗಿದ್ದು, ಕ್ರಿಮಿನಲ್‌ಗಳು ವ್ಯಕ್ತಿಗಳಿಗೆ ಕರೆಮಾಡುವ ಮೂಲಕ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುವಂತೆ ಪ್ರೇರೇಪಿಸುತ್ತಾರೆ. ವಿಷರ್‌ಗಳು ಸಾಮಾನ್ಯವಾಗಿ ಟೆಕ್ನಿಕಲ್‌ ಸಪೋರ್ಟ್‌, ಸರ್ಕಾರಿ ಸಂಸ್ಥೆಗಳು ಅಥವಾ ಸಂಕಷ್ಟದಲ್ಲಿರುವ ಕುಟುಂಬ ಸದಸ್ಯರಂತೆ ಸೋಗು ಹಾಕುತ್ತಾರೆ. ಅವರು ನಿಮ್ಮನ್ನು ವೈಯಕ್ತಿಕ ಮಾಹಿತಿ ಅಥವಾ ಹಣಕಾಸಿನ ವಿವರಗಳನ್ನು ಒದಗಿಸುವಂತೆ ಸೋಶಿಯಲ್‌ ಎಂಜಿನಿಯರಿಂಗ್ ತಂತ್ರಗಳನ್ನು ಬಳಸುತ್ತಾರೆ.

ವಿಷಿಂಗ್ ಸ್ಕ್ಯಾಮ್‌ಗಳನ್ನು ಗುರುತಿಸುವುದು ಹೇಗೆ

  • ಕಾಲರ್ ಐಡಿ ವಂಚನೆ: ವಂಚಕರು ಕಾನೂನುಬದ್ಧ ಮೂಲಗಳಿಂದ ಕರೆ ಮಾಡುತ್ತಿರುವಂತೆ ನಟಿಸುತ್ತಾರೆ. 
  • ಭಾವನಾತ್ಮಕ ಕುತಂತ್ರ: ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ ಅಥವಾ ನೀವು ಈ ಕೂಡಲೇ ತೆರಿಗೆ ಪಾವತಿಸಬೇಕಾಗಿದೆ ಎಂದು ಹೇಳಿಕೊಳ್ಳುವಂತಹ ತುರ್ತು ಪರಿಸ್ಥಿತಿಯನ್ನು  ಅವರು ಸೃಷ್ಟಿಸುತ್ತಾರೆ.
  • ಸೋಷಿಯಲ್ ಎಂಜಿನಿಯರಿಂಗ್: ಅವರು ನಿಮ್ಮ ಗುರುತನ್ನು ಪರಿಶೀಲಿಸುವ ನೆಪದಲ್ಲಿ ಪಾಸ್‌ವರ್ಡ್‌ಗಳು, ಪಿನ್‌ಗಳು ಅಥವಾ OTP ಗಳು ಸೇರಿದಂತೆ ಸೂಕ್ಷ್ಮ ವಿವರಗಳನ್ನು ಕೇಳುತ್ತಾರೆ.

ವಿಷಿಂಗ್ ಸ್ಕ್ಯಾಮ್‌ಗಳನ್ನು ತಪ್ಪಿಸುವುದು ಹೇಗೆ

  • ಕರೆ ಮಾಡಿದವರು ತಾವು ಬ್ಯಾಂಕ್‌ನವರು ಎಂದು ಹೇಳಿಕೊಂಡರೂ, ಫೋನ್‌ ಮೂಲಕ ಬ್ಯಾಂಕಿಂಗ್ ವಿವರಗಳು ಅಥವಾ OTP ಗಳನ್ನು ಎಂದಿಗೂ ಬಹಿರಂಗಪಡಿಸಬೇಡಿ.
  • ಹಣಕಾಸು ಅಥವಾ ವೈಯಕ್ತಿಕ ಮಾಹಿತಿಯನ್ನು ಕೇಳುವ ಅನಗತ್ಯ ಕರೆಗಳ ಬಗ್ಗೆ ಜಾಗರೂಕರಾಗಿರಿ.
  • ಸಂದೇಹವಿದ್ದರೆ, ಫೋನ್ ಕರೆಯನ್ನು ಕಟ್‌ ಮಾಡಿ ಮತ್ತು ಸಂಸ್ಥೆಯ ಅಧಿಕೃತ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ.

ಸಾಮಾನ್ಯ ವಿಷಯ: ಕುತಂತ್ರ

ಈ ಎಲ್ಲ ವಿಧಾನಗಳು ಬೇರೆ ಬೇರೆಯಾಗಿದ್ದರೂ, ಫಿಶಿಂಗ್, ಸ್ಮಿಶಿಂಗ್‌ ಮತ್ತು ವಿಷಿಂಗ್ ಎಲ್ಲವೂ ಕುತಂತ್ರಗಳೇ ಆಗಿರುತ್ತವೆ. ಅವರು ನಮ್ಮ ನಂಬಿಕೆ, ಭಯ ಅಥವಾ ಕುತೂಹಲವನ್ನು ಬಳಸಿಕೊಂಡು ನಮ್ಮ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುವಂತೆ ಮಾಡುತ್ತಾರೆ. ಈ ವಂಚನೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಸುರಕ್ಷಿತ ಆನ್‌ಲೈನ್ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ, ನೀವು ವಂಚನೆಯ ಬಲೆಗೆ ಬೀಳುವ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಜಾಗೃತರಾಗಿರಿ, ಜಾಗರೂಕರಾಗಿರಿ ಮತ್ತು ಫಿಶಿಂಗ್ ವಂಚನೆಗಳಿಂದ ಮೋಸಹೋಗದಿರಿ!

ಫಿಶಿಂಗ್, ವಿಷಿಂಗ್ ಮತ್ತು ಸ್ಮಿಶಿಂಗ್‌ ಪ್ರಕರಣಗಳನ್ನು ವರದಿ ಮಾಡುವುದು ಹೇಗೆ

ನೀವು ವಂಚನೆಗೆ ಗುರಿಯಾಗಿದ್ದೀರಿ ಎಂದು ನಿಮಗೆ ಅನುಮಾನ ಉಂಟಾದರೆ ಕೂಡಲೇ ಈ ಕೆಳಗಿನ ಸಂಪರ್ಕಗಳ ಮೂಲಕ ವರದಿ ಮಾಡಿ:

PhonePe ನಲ್ಲಿ ವರದಿ ಮಾಡುವುದು

ಅಧಿಕಾರಿಗಳಿಗೆ ವರದಿ ಮಾಡುವುದು

ಪ್ರಮುಖ ಸೂಚನೆ — PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಬಂದಿರದ, PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಎಲ್ಲಾ ಇಮೇಲ್‌ಗಳನ್ನು ನಿರ್ಲಕ್ಷಿಸಿ. ವಂಚನೆಯ ಅನುಮಾನವಿದ್ದರೆ, ದಯವಿಟ್ಟು ತಕ್ಷಣ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ.

Keep Reading